ಕೂಡ್ಲಿಗಿ; ಅನಿಯಂತ್ರಿತ ಆನ್ಲೈನ್ ಔಷಧ ಮಾರಾಟದಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ಬಂದಿದೆ. ಶೆಡ್ಯೂಲ್ ಡ್ರಗ್ಸ್ ದುರುಪಯೋಗ ತಡೆದು ಚಿಲ್ಲರೆ ಔಷಧ ಅಂಗಡಿಗಳನ್ನು ಉಳಿಸುವಂತೆ ಆಗ್ರಹಿಸಿ ಕಾನ ಹೊಸಹಳ್ಳಿ ಔಷಧ ವ್ಯಾಪಾರಿಗಳ ಸಂಘದ ವತಿಯಿಂದ ಬುಧವಾರ ನಾಡಕಚೇರಿಯ ಅನಿತಾ ಪೂಜಾರಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸಂಘದ ಮುಖಂಡ ಬಿ. ಮಂಜುನಾಥ್ ಮಾತನಾಡಿ,”ಕಾರ್ಪೊರೇಟ್ ಕಂಪನಿಗಳು ಆನ್ಲೈನ್ನಲ್ಲಿ ವೈದ್ಯರ ಚೀಟಿ ಇಲ್ಲದೆ H, H1 ಔಷಧಗಳನ್ನು ಮಾರಾಟ ಮಾಡುತ್ತಿವೆ. ನಕಲಿ ಔಷಧ, ಸ್ವಯಂ ಚಿಕಿತ್ಸೆಯಿಂದ ಜನರ ಪ್ರಾಣಕ್ಕೆ ಅಪಾಯವಾಗಿದೆ. ಸರ್ಕಾರ ಕೂಡಲೇ ಆನ್ಲೈನ್ ಔಷಧ ಮಾರಾಟಕ್ಕೆ ಕಡಿವಾಣ ಹಾಕಬೇಕು. ಹಳ್ಳಿಗಳಲ್ಲಿ 30-40 ವರ್ಷದಿಂದ ಸೇವೆ ನೀಡುತ್ತಿರುವ ನಮ್ಮಂತಹ ಚಿಲ್ಲರೆ ಅಂಗಡಿಗಳು ಬೀಗ ಹಾಕುವ ಸ್ಥಿತಿ ಬಂದಿದೆ. ಇಂದು ಸಾಂಕೇತಿಕ ಬಂದ್ ಮಾಡಿದ್ದೇವೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.
“ಆನ್ಲೈನ್ನಲ್ಲಿ ಶೇ. 20 ರಿಂದ 30 ರಷ್ಟು ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಆದರೆ ಔಷಧದ ಗುಣಮಟ್ಟ, ಅವಧಿ ಬಗ್ಗೆ ಖಾತ್ರಿ ಇಲ್ಲ. ಇದು ಜನರ ಜೀವದ ಜೊತೆ ಚೆಲ್ಲಾಟ” ಎಂದು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಮನವಿ ಸ್ವೀಕರಿಸಿದ ಅನಿತಾ ಪೂಜಾರಿ ಅವರು, ಮನವಿಯನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಿ. ಮಂಜುನಾಥ್, ನಿತೀಶ್, ಇಮ್ರಾನ್, ಕೊಟ್ರೇಶ್, ನಾಗಭೂಷಣ್, ಆನಂದ್ ಸ್ವಾಮಿ, ಸೋಮಶೇಖರ್, ಮಂಜುನಾಥ್ ಜಿ.ಎಸ್., ದೇವರಾಜ್, ಪ್ರವೀಣ್, ಶ್ರೀರಾಮ್, ರಾಮಣ್ಣ, ಜ್ಯೋತಿ, ರಮೇಶ್, ತಿಪ್ಪೇಶ್, ರಾಕೇಶ್, ಈಶಣ್ಣ ಸೇರಿದಂತೆ ಹೋಬಳಿಯ ಔಷಧ ವ್ಯಾಪಾರಿಗಳು ಉಪಸ್ಥಿತರಿದ್ದರು.
ಸುದ್ದಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

