ವಿಜಯನಗರ; ಜಿಲ್ಲೆಯ ಮಾದರಿ ಗ್ರಾಮ ಚಿಕ್ಕಜೋಗಿಹಳ್ಳಿಯಲ್ಲಿ ರಾಜ್ಯದಲ್ಲಿಯೇ ಮೊದಲ ಭಾರಿಗೆ ಜಪಾನ್ ಮಾದರಿಯ ‘ಮಿಯಾವಾಕಿ’ ತೋಟಗಾರಿಕೆ ಬೆಳೆಗಳ ಅರಣ್ಯೀಕರಣ ಮಾಡುವಂಥ ಕಾರ್ಯಕ್ಕೆ ಈಗಾಗಲೇ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

ಕಿರು ಅರಣ್ಯ ಯೋಜನೆಯಡಿ ತಾಲೂಕಿನಾದ್ಯಂತ ಇರುವ ಬಂಜರು, ಅನುತ್ಪಾದಕ ಹಾಗೂ ನಿರ್ಲಕ್ಷö್ಯಕ್ಕೆ ಒಳಗಾಗಿರುವ ಭೂಮಿ, ಸರಕಾರಿ ಹಾಗೂ ಆಸಕ್ತ ರೈತರ ಜಮೀನುಗಳಲ್ಲಿ ಹುಣಸೆ, ಬೇಲ, ನೆಲ್ಲಿ, ನೇರಳೆ, ಕವಳೆ, ಚರ್ರಿ, ನಿಂಬೆ ಹಾಗೂ ಹಸಿರೆಲೆ ಗೊಬ್ಬರದ ಮರಗಳಾಗಿ ಬೆಳೆಸಲು ಬೇವು, ಹೊಂಗೆ ಸೇರಿದಂತೆ ಹತ್ತು ರೀತಿಯ ವಿಧದ ೧ ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಅದರ ಮೊದಲ ಭಾಗವಾಗಿ ಕಾನಾಹೊಸಹಳ್ಳಿ ಸಮೀಪದ ಚಿಕ್ಕಜೋಗಿಹಳ್ಳಿಯಲ್ಲಿ ತೋಟಗಾರಿಕೆ ಇಲಾಖೆಗೆ ಸೇರಿದ ೧೦ ಎಕರೆಗೂ ಹೆಚ್ಚಿನ ವಿಸ್ತೀರ್ಣದ ಭೂಮಿಯಲ್ಲಿ ೧೫ ಸಾವಿರ ಸಸಿಗಳನ್ನು ನೆಡುವುದಕ್ಕಾಗಿ ಜಾಗದ ಸ್ವಚ್ಛತೆ ಹಾಗೂ ಗುಂಡಿ ತೋಡುವ ಕಾರ್ಯವೂ ಹದಿನೈದು ದಿನಗಳಿಂದ ಭರದಿಂದ ನಡೆಯುತ್ತಿದೆ.
ಚಿಕ್ಕಜೋಗಿಹಳ್ಳಿಗೆ ಜೂ.೫ರಂದು ಕೇಂದ್ರ ಸಚಿವೆ
ಜೂ.೫ರಂದು ನಡೆಯುವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅವರು ಭಾಗವಹಿಸಲಿದ್ದು, ಬಯಲುಸೀಮೆಯ ತಾಲೂಕಾದ್ಯಂತ ೧ ಲಕ್ಷ ಸಸಿ ನೆಡುವಂಥ ಕಿರು ಕಾಡು ಬೆಳೆಸುವ ಯೋಜನೆಗೆ ಚಾಲನೆ ನೀಡಲಿದ್ದಾರೆ. ಆ ಮೂಲಕ ಪ್ರಧಾನಿಯಾಗಿದ್ದ ಅವಧಿಯಲ್ಲಿ ಇಂದಿರಾ ಗಾಂಧಿ ಬಂದು ಹೋಗಿದ್ದ ಊರು ಚಿಕ್ಕಜೋಗಿಹಳ್ಳಿಗೆ ಈಗಿನ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮ್ ಭೇಟಿ ನೀಡಿದಂತಾಗಲಿದೆ. ತಾಲೂಕಿನಲ್ಲಿ ಈ ಕಿರು ಕಾಡು ಯೋಜನೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ನೇತೃತ್ವದಲ್ಲಿ ಈಗಾಗಲೇ ೨-೩ ಸಲ ಸಭೆಗಳನ್ನು ನಡೆಸುವುದರೊಂದಿಗೆ ಈ ಕಿರು ಅರಣ್ಯ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡುವಂಥ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುವುದರಿಂದ ತಾಲೂಕಿನ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ.
ವಿಶ್ವದ ಅತಿದೊಡ್ಡ ಕಾಡು ಮಾಡಿದ್ದ ಡಾ.ನಾಯರ್ ನೇತೃತ್ವ
ವಿಶ್ವದ ಅತಿದೊಡ್ಡ ಕಾಡು ಮಿಯಾವಾಕಿ ಮಾಡಿರುವ ಗ್ರೀನ್ ಹೀರೋ ಆಫ್ ಇಂಡಿಯಾ ಆಗಿರುವಂಥ ಡಾ.ಆರ್.ಕೆ.ನಾಯರ್ ಅವರು ಅವರೇ ಕೂಡ್ಲಿಗಿ ತಾಲೂಕಿನಲ್ಲಿ ರಾಜ್ಯದ ಮೊದಲ ಅತಿದೊಡ್ಡ ಕಿರು ಕಾಡು ಬೆಳೆಸುವಂಥ ನೇತೃತ್ವ ವಹಿಸಿದ್ದಾರೆ. ತಾಲೂಕಿನಲ್ಲಿ ೩೦೦ ಎಕರೆಯಷ್ಟು ಅರಣ್ಯೀಕರಣಕ್ಕೆ ಯೋಜನೆ ರೂಪಿಸಲಾಗಿದ್ದು, ವರ್ಷಕ್ಕೆ ೫೦ ಸಾವಿರದಂತೆ ೨ ವರ್ಷಗಳಲ್ಲಿ ಒಟ್ಟು ೧ ಲಕ್ಷ ತೋಟಗಾರಿಕೆ ಬೆಳೆಗಳ ಸಸಿಗಳನ್ನು ನಡೆಲಾಗುತ್ತಿದೆ. ಈ ಯೋಜನೆಯನ್ನು ದೇಶದ ನಾನಾ ಕಂಪನಿಗಳಿಂದ ಲಭ್ಯವಾಗುವ ‘ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ’ ಹಣದಲ್ಲಿ ‘ಎನ್ವಿರೋ ಫಾರೆಸ್ಟ್ ಕ್ರಿಯೇರ್ಸ್ ಸಂಸ್ಥೆ’ಯ ಮೂಲಕ ಅನುಷ್ಠಾನಗೊಳ್ಳುತ್ತಿದ್ದು, ಈ ವರ್ಷದಿಂದ ಆರಂಭಗೊಳ್ಳುತ್ತಿದೆ ಮೊದಲು ಹದಿನೈದು ಸಾವಿರ ಗಿಡಗಳನ್ನು ನೆಡಲಿದ್ದು ಎಸ್ ಎಂ ಸಿ ಐ ಎಲ್ ಪ್ರಿಂಟಿಂಗ್ ಕಂಪನಿಯ ಸಿ ಎಸ್ ಆರ್ ಪಂಡ್ ನಿಂದ ಅಭಿವೃದ್ಧಿ ಪಡಿಸಲಿದ್ದಾರೆ.
ಐದು ವರ್ಷಗಳ ಕಾಲ ರೈತರಿಗೆ ಅವರೇ ಎಲ್ಲಾ ನೊಡಿಕೊಳ್ಳಲಿದ್ದು, ಮಾರುಕಟ್ಟೆ ಹಾಗೂ ಮಾರ್ಗದರ್ಶಕರಾಗಿ ಸ್ಥಳೀಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜೊತೆಯಾಗಿರುವರು.
ಕೊಟ್ಟ ಮಾತಿಗೆ ಬದ್ಧರಾದ ಸಚಿವೆ ನಿರ್ಮಲಾ
ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಬಳಿ ನಿರ್ಮಾಣಗೊಂಡಿರುವ ಹುಣಸೆ ಹಾಗೂ ಶೇಂಗಾ ಸಂಸ್ಕರಣ ಘಟಕ ಉದ್ಘಾಟನೆಗೆ ೨೦೨೫ರ ಸೆ.೧೭ರಂದು ಆಗಮಿಸಿದ್ದ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿ ತಾಲೂಕಿನಲ್ಲಿ ೧ ಲಕ್ಷ ಸಸಿಗಳನ್ನು ನೆಡುವುದಕ್ಕೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅವರು ಕೇವಲ ೮ ತಿಂಗಳಲ್ಲೇ ಕಾರ್ಯರೂಪಕ್ಕೆ ತರುವ ಮೂಲಕ ಕೊಟ್ಟ ಮಾತಿಗೆ ಬದ್ಧರಾಗಿದ್ದಾರೆ. ಅಲ್ಲದೆ, ಕೂಡ್ಲಿಗಿ ತಾಲೂಕಿಗೆ ಒಂದು ವರ್ಷದ ಅವಧಿಯಲ್ಲಿ ಕೇಂದ್ರ ಸಚಿವರೊಬ್ಬರು ೨ ಬಾರಿ ಭೇಟಿ ನೀಡುವಂಥ ಕೀರ್ತಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾಜನರಾಗಲಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಇದೇ ಮೊದಲು ಇಷ್ಟೊಂದು ದೊಡ್ಡಮಟ್ಟದ ಕಾಡು ಕೃಷಿಯ ‘ಭಾರತ ವನ’ ಮಾಡಲಾಗುತ್ತಿದ್ದು, ಅದು, ಬಯಲುಸೀಮೆಯಂತಿರುವ ಕೂಡ್ಲಿಗಿ ತಾಲೂಕಿನಲ್ಲಿ ಅನುಷ್ಠಾನವಾಗುತ್ತಿದೆ. ಸಿಎಸ್ಆರ್ ಅನುದಾನದಲ್ಲಿ ಈ ತಾಲೂಕಿನ ಹವಾಗುಣಕ್ಕೆ ಹೊಂದಿಕೆಯಾಗುವ ಹಣ್ಣುಗಳ ಸಸಿಗಳು ಸೇರಿ ೧ ಲಕ್ಷ ಸಸಿಗಳನ್ನು ೨ ವರ್ಷಗಳಲ್ಲಿ ನೆಡಲಾಗುವುದು.
– ಡಾ.ಆರ್.ಕೆ.ನಾಯರ್, ಗ್ರೀನ್ ಹೀರೋ ಆಫ್ ಇಂಡಿಯಾ, ಸುಳ್ಯ
ಕೂಡ್ಲಿಗಿ ತಾಲೂಕು ಮಳೆಯಾಶ್ರಿತ ಪ್ರದೇಶವಾದ್ದರಿಂದ ಬಂಜರು, ಉಳುಮೆ ಮಾಡದಿರುವ ಭೂಮಿಗಳಲ್ಲಿ ಕಾಡು ಕೃಷಿಗೆ ಆದ್ಯತೆ ನೀಡುವುದರಿಂದ ಒಳ್ಳೆಯದಾಗಲಿದೆ. ತಾಲೂಕಿನ ಕೃಷಿ ವಲಯಕ್ಕೆ ಹೆಚ್ಚಿನ ಉತ್ತೇಜನ ಸಿಗುವಂಥ ಕಿರು ಕಾಡು ಕೃಷಿ ಯೋಜನೆ ಇದಾಗಿದೆ.
– ಡಾ.ಎನ್.ಟಿ.ಶ್ರೀನಿವಾಸ್, ಶಾಸಕರು, ಕೂಡ್ಲಿಗಿ
ಸುದ್ದಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

