ಕಾನಹೊಸಹಳ್ಳಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರ ಹಾಗೂ ಜವಾಬ್ದಾರಿಯುತವಾದ ವೃತ್ತಿಯಾಗಿದೆ. ಪ್ರಶಿಕ್ಷಣಾರ್ಥಿಗಳು ಕೇವಲ ಪದವಿ ಪಡೆಯುವುದಕ್ಕೆ ಸೀಮಿತವಾಗದೆ, ಉತ್ತಮ ಜ್ಞಾನ ಮತ್ತು ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಮಾದರಿಯಾಗುವ ಆದರ್ಶ ಶಿಕ್ಷಕರಾಗಿ ರೂಪುಗೊಳ್ಳಬೇಕು ಎಂದು ದಾಸೋಹ ಮಠದ ಧರ್ಮಾಧಿಕಾರಿ ಐಮಡಿ ಶರಣಾರ್ಯರು ಹೇಳಿದರು.
ಸಮೀಪದ ಕಾನಮಡುಗು ಗ್ರಾಮದ ಶ್ರೀ ಶರಣ ಬಸವೇಶ್ವರ ಶಿಕ್ಷಕರ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ಡಿ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಬ್ರಿಟಿಷರ ಕಾಲದಲ್ಲಿಯೇ ಶಿಕ್ಷಣ ಸಂಸ್ಥೆ ಆರಂಭಗೊಂಡಿದ್ದು, ಶ್ರೀಮಠದ ಪರಂಪರೆ ಹಾಗೂ ಶಿಕ್ಷಣ ಕ್ಷೇತ್ರದ ಬೆಳವಣಿಗೆಯನ್ನು ನಾಡಿಗೆ ಪರಿಚಯಿಸಿದ ಕೀರ್ತಿ ನಾಲ್ವಡಿ ಶರಣಾರ್ಯರಿಗೆ ಸಲ್ಲುತ್ತದೆ ಎಂದು ಸಂಸ್ಥೆಯ ಇತಿಹಾಸವನ್ನು ಸ್ಮರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಲೂರು ಕ್ಲಸ್ಟರ್ ಸಂಪನ್ಮೂಲ ಅಧಿಕಾರಿ ಸಿದ್ದೇಶ್ ಮಾತನಾಡಿ, ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಮಧ್ಯಭಾಗದಲ್ಲಿರುವ ಈ ಶಿಕ್ಷಣ ಸಂಸ್ಥೆ ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹಾಗೂ ಪರಂಪರೆಯನ್ನು ಹೊಂದಿದೆ. ಹಿಂದಿನ ಶಿಕ್ಷಣ ವ್ಯವಸ್ಥೆಗೂ ಪ್ರಸ್ತುತ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ಬದಲಾವಣೆಗಳಾಗಿವೆ. ಶಿಕ್ಷಕರ ತರಬೇತಿ ಪಡೆಯುತ್ತಿರುವ ಪ್ರಶಿಕ್ಷಣಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಬೇಕು ಎಂದು ಆಶಿಸಿದರು.
ಶರಣ ಬಸವೇಶ್ವರ ಪ್ರೌಢಶಾಲೆಯ ಮುಖ್ಯಗುರು ಬೊಮ್ಮಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಸಂಸ್ಥೆಯ ಪ್ರಾಂಶುಪಾಲ ಸುಭಾಷ್ ಚಂದ್ರ ಬೋಸ್, ಸಂಸ್ಥೆಯ ಪದಾಧಿಕಾರಿ ಶರಣಪ್ಪ, ಉಪನ್ಯಾಸಕರಾದ ಕಾಶಿನಾಥ್, ಶರತ್, ಭದ್ರಪ್ಪ, ದಾದಾಕಲಂದರ್, ಆನಂದ ಗೌಡ್ರು, ಚಿದಾನಂದಪ್ಪ ಸೇರಿದಂತೆ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು, ಅವರ ಶೈಕ್ಷಣಿಕ ಪಯಣಕ್ಕೆ ಶುಭ ಹಾರೈಸಿದರು.
Trending
- ರೈತ ಸಹಕಾರ ಸಂಘದಲ್ಲಿ ಅವ್ಯವಹಾರದ ಆರೋಪ: ಕಚೇರಿ ಮುಂದೆ ಸಾರ್ವಜನಿಕರ ಪ್ರತಿಭಟನೆ
- ಕಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಆತ್ಮಹತ್ಯೆ
- ಹೊಸಪೇಟೆಯಲ್ಲಿ ತಡರಾತ್ರಿ ಯುವಕನ ಬರ್ಬರ ಹತ್ಯೆ
- ದೇಹದ ಸ್ವಚ್ಛತೆಯೊಂದಿಗೆ ಮನಶುದ್ಧಿಗೂ ಆದ್ಯತೆ ನೀಡಿ: ಸ್ವರೂಪ್ ಕೊಟ್ಟೂರು
- ಶಿಕ್ಷಕರಾಗಿ ಸಮಾಜದ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ಮದು: ಐಮಡಿ ಶರಣಾರ್ಯರು
- ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ
- ಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ!
- ಪ್ರಕೃತಿ ಸಂರಕ್ಷಣೆಗೆ ಪ್ರತಿಯೊಬ್ಬರು ಒಂದು ಗಿಡ ನೆಡಿ

