ಕೂಡ್ಲಿಗಿ: ದೇಹದ ಸ್ವಚ್ಛತೆಗೆ ನೀಡುವಷ್ಟೇ ಮಹತ್ವವನ್ನು ಮನಸ್ಸು ಮತ್ತು ಆತ್ಮದ ಶುದ್ಧತೆಗೂ ನೀಡಬೇಕು. ಪಾಂಡುರಂಗ ವಿಠಲನ ನಾಮಸ್ಮರಣೆ ಹಾಗೂ ಆರಾಧನೆಯಿಂದ ಮನಸ್ಸಿನಲ್ಲಿರುವ ದುರ್ಗುಣಗಳು, ರಾಗ-ದ್ವೇಷಗಳು ದೂರವಾಗಿ ಆತ್ಮಶುದ್ಧಿ ಸಾಧ್ಯವಾಗುತ್ತದೆ ಎಂದು ಕೂಡ್ಲಿಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಾಗೂ ಲೇಖಕ ಸ್ವರೂಪ್ ಕೊಟ್ಟೂರು ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೈವಲ್ಯಾಪುರದಲ್ಲಿ ಪಂಡರಾಪುರಕ್ಕೆ ಪಾದಯಾತ್ರೆ ಕೈಗೊಂಡಿರುವ ಚಿತ್ರದುರ್ಗ ಜಿಲ್ಲೆಯ ಗೊಡಬನಹಾಳ್ ಗ್ರಾಮದ ಪಾಂಡುರಂಗನ ದಿಂಡಿಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸ್ನಾನ ಮಾಡುವುದರಿಂದ ದೇಹದ ಮೇಲಿನ ಕೊಳೆ ನಿವಾರಣೆಯಾಗುತ್ತದೆ. ಆದರೆ ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳು, ಭಾವನೆಗಳು ಹಾಗೂ ದುರ್ಗುಣಗಳನ್ನು ತೊಡೆದುಹಾಕಲು ದೇವರ ಧ್ಯಾನ ಮತ್ತು ನಾಮಸ್ಮರಣೆ ಅಗತ್ಯ. ಪಂಡರಾಪುರದ ವಿಠಲನ ದಿಂಡಿಯಲ್ಲಿ ಪಾಲ್ಗೊಳ್ಳುವುದು ಜೀವನದ ಮಹತ್ವದ ಸಂಕಲ್ಪ ಹಾಗೂ ಸೌಭಾಗ್ಯವಾಗಿದೆ. ಪಾದಯಾತ್ರೆಯುದ್ದಕ್ಕೂ ವಿಠಲನ ಭಜನೆ, ಅಭಂಗಗಳ ಗಾಯನದಲ್ಲಿ ತೊಡಗುವುದರಿಂದ ಮನಸ್ಸಿನಲ್ಲಿರುವ ಅಹಂಕಾರ, ಅಜ್ಞಾನ, ರಾಗ-ದ್ವೇಷಗಳು ಕಡಿಮೆಯಾಗಿ ಮನಸ್ಸು ಪರಿಶುದ್ಧವಾಗುತ್ತದೆ. ಮೋಹ ಮತ್ತು ಭ್ರಮೆಗಳಿಂದ ಹೊರಬಂದು ಜೀವನದ ನೈಜ ಮೌಲ್ಯಗಳನ್ನು ಅರಿಯಲು ಆಧ್ಯಾತ್ಮಿಕತೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಆಧ್ಯಾತ್ಮಿಕ ಸಾಧಕ ಶಿವಪುರ ನಾಗೇಂದ್ರಪ್ಪ ಅವರು ದಿಂಡಿಗೆ ಪ್ರಸಾದ ವ್ಯವಸ್ಥೆ ಮಾಡಿ ಮಾತನಾಡಿ, ಆಧ್ಯಾತ್ಮಿಕ ಮಾರ್ಗದಲ್ಲಿ ಸಾಗುವಾಗ ಅನೇಕ ಸವಾಲುಗಳು ಹಾಗೂ ಸಂಕಷ್ಟಗಳು ಎದುರಾಗುವುದು ಸಹಜ. ಅವು ಮನುಷ್ಯನನ್ನು ಪರೀಕ್ಷಿಸಿ ಮತ್ತಷ್ಟು ಗಟ್ಟಿಗೊಳಿಸುತ್ತವೆ. ಕಷ್ಟಗಳನ್ನು ನೀಡುವವನೂ, ಅವುಗಳಿಂದ ಮುಕ್ತಿ ಕಲ್ಪಿಸುವವನೂ ಭಗವಂತನೇ ಎಂಬ ನಂಬಿಕೆಯೊಂದಿಗೆ ಮುನ್ನಡೆಯಬೇಕು. ದೇವರ ನಾಮಸ್ಮರಣೆಯೇ ಬದುಕಿನಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ದೊಡ್ಡ ಶಕ್ತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಅನಂತ ಪದ್ಮನಾಭ ದೇಗುಲದ ಅರ್ಚಕ ಅನಂತಶಯನ, ಗೊಡಬನಾಳ್ ಬಸಣ್ಣ, ವೀರಪ್ಪ, ಪಾಪಣ್ಣ, ರಾಮಪ್ಪ, ಹೆಗ್ಡಾಳ್ ಬಸಣ್ಣ, ಆಶಾ ಸ್ವರೂಪ್, ಈಚಲಬೊಮ್ಮನಹಳ್ಳಿ ಮಹೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
Trending
- ರೈತ ಸಹಕಾರ ಸಂಘದಲ್ಲಿ ಅವ್ಯವಹಾರದ ಆರೋಪ: ಕಚೇರಿ ಮುಂದೆ ಸಾರ್ವಜನಿಕರ ಪ್ರತಿಭಟನೆ
- ಕಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಆತ್ಮಹತ್ಯೆ
- ಹೊಸಪೇಟೆಯಲ್ಲಿ ತಡರಾತ್ರಿ ಯುವಕನ ಬರ್ಬರ ಹತ್ಯೆ
- ದೇಹದ ಸ್ವಚ್ಛತೆಯೊಂದಿಗೆ ಮನಶುದ್ಧಿಗೂ ಆದ್ಯತೆ ನೀಡಿ: ಸ್ವರೂಪ್ ಕೊಟ್ಟೂರು
- ಶಿಕ್ಷಕರಾಗಿ ಸಮಾಜದ ಭವಿಷ್ಯ ರೂಪಿಸುವ ಜವಾಬ್ದಾರಿ ನಿಮ್ಮದು: ಐಮಡಿ ಶರಣಾರ್ಯರು
- ಹಾಲಿನ ದರ ಏರಿಕೆ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ಆಕ್ರೋಶ
- ಹೊಸೂರು ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ!
- ಪ್ರಕೃತಿ ಸಂರಕ್ಷಣೆಗೆ ಪ್ರತಿಯೊಬ್ಬರು ಒಂದು ಗಿಡ ನೆಡಿ

