ಕೂಡ್ಲಿಗಿ; ತಾಲೂಕಿನ ಕಾನಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೇಮಕಾತಿ, ಚುನಾವಣೆ ಸೇರಿದಂತೆ ಇತರೆ ವ್ಯವಹಾರಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸೋಮವಾರ ಸಾರ್ವಜನಿಕರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆ ಸಂಘದ ಅಧ್ಯಕ್ಷ ಹಾಗೂ ನಿರ್ದೇಶಕರು ಬರುವಂತೆ ಪಟ್ಟು ಹಿಡಿದ ಪ್ರತಿಭಟನಾಕರರು, ನ.೧೭ರಂದು ಅಧ್ಯಕ್ಷ ಸೇರಿ ಎಲ್ಲ ನಿರ್ದೇಶಕರು ಕಚೇರಿಗೆ ಬರಬೇಕು. ಸಿಬ್ಬಂದಿ ನೇಮಕಾತಿ ಹಾಗೂ ಚುನಾವಣೆ ಅಕ್ರಮದ ಕುರಿತು ಮಾಹಿತಿ ನೀಡಲು ಸಭೆ ಕರೆಯಬೇಕು ಎಂದು ಒತ್ತಾಯಿಸಿದರಲ್ಲದೆ, ನಿರ್ಲಕ್ಷö್ಯವಹಿಸಿದರೆ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.
ಸಹಕಾರ ಸಂಘದ ಸಿಬ್ಬಂದಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಒಂದೊAದು ಹುದ್ದೆಗೆ ಲಕ್ಷಾಂತರ ರೂ. ಪಡೆದು ತಮಗೆ ಬೇಕಾದವರನ್ನು ನೇಮಿಸಿಕೊಳ್ಳಲಾಗಿದೆ. ಕೆಲ ಅಭ್ಯರ್ಥಿಗಳಿಂದ ಹಣ ಪಡೆದಿದ್ದರೂ ಉದ್ಯೋಗ ನೀಡದೆ ವಂಚಿಸಲಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಪ್ರಕ್ರಿಯೆ ಮುಗಿಸಲಾಗಿದೆ ಎಂದು ಉದ್ಯೋಗ ವಂಚಿತ ಯುವಕ ಮಂಜುನಾಥ್ ಆರೋಪಿಸಿದರು. ವೃದ್ಧೆ ಗೌರಮ್ಮ ಅವರು, ನನ್ನ ಮೊಮ್ಮಗನಿಗೆ ಸಹಕಾರ ಸಂಘದಲ್ಲಿ ಕೆಲಸ ಕೊಡಿಸುವುದಾಗಿ ನಿರ್ದೇಶಕರೊಬ್ಬರು ೪.೧೫ ಲಕ್ಷ ರೂ. ಪಡೆದಿದ್ದರೂ ನೌಕರಿಯೂ ಕೊಡಿಸದೆ, ಹಣವೂ ವಾಪಸ್ ನೀಡಿಲ್ಲ. ನಾನು ಕ್ಯಾನ್ಸರ್ನಿಂದ ಬಳಲುತ್ತಿದ್ದರೂ ನನ್ನ ಮೊಮ್ಮಗನಿಗೆ ಉದ್ಯೋಗ ಸಿಗಬಹುದೆಂಬ ಆಸೆಯಿಂದ ಕಷ್ಟಪಟ್ಟು ಹಣ ಹೊಂದಿಸಿ ನೀಡಿದ್ದೆವು ಎಂದು ವೃದ್ಧೆ ಕಣ್ಣೀರು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ಶರಣಗೌಡ, ಸೂರ್ಯಪ್ರಕಾಶ, ಎಚ್.ಬಿ.ಸತೀಶ್, ಜುಟ್ಟಲಿಂಗನಹಟ್ಟಿ ಬೊಮ್ಮಣ್ಣ, ಫೋಟೋ ಸಿದ್ದಲಿಂಗಪ್ಪ, ಬಿ.ಟಿ.ಗುದ್ದಿ ಚಂದ್ರಪ್ಪ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಿಬ್ಬಂದಿ ನೇಮಕಾತಿ ಹಾಗೂ ಚುನಾವಣೆ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಂಘದ ಸಿಇಒ ಸಿದ್ಧನಗೌಡ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯಂಬಳಿ ಗಂಗಣ್ಣ, ನಿವೃತ್ತ ಶಿಕ್ಷಕ ಜಿಲಾನ್, ಬೋರಣ್ಣ, ಲಕ್ಕಜ್ಜಿ ಮಲ್ಲಿಕಾರ್ಜುನ್, ಶಿವಕುಮಾರ್, ವಿರೂಪಾಕ್ಷಿ, ಸಕಲಪುರದಹಟ್ಟಿ ಹರೀಶ್, ಯಂಬಳಿ ಮಂಜುನಾಥ್, ತಿಪ್ಪೇಸ್ವಾಮಿ, ಫೋಟೋ ನಾಗರಾಜ, ನಾಗಣ್ಣ, ಕಂಡಕ್ಟರ್ ಬಸವರಾಜ ಸೇರಿ ಇತರರಿದ್ದರು.
ನಿರ್ದೇಶಕರ ಆಯ್ಕೆ ರದ್ದುಗೊಳಿಸಿ
ತಾಲೂಕಿನ ಜುಮೋಬನಹಳ್ಳಿ ಗ್ರಾಪಂ ವ್ಯಾಪ್ತಿಗೆ ಪ್ರತ್ಯೇಕ ಸಹಕಾರ ಸಂಘ ಸ್ಥಾಪನೆಯಾಗಿದ್ದರೂ, ಅಲ್ಲಿನ ಷೇರುದಾರರಿಂದ ಕಾನಹೊಸಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ಮತ ಹಾಕಿಸಲಾಗಿದೆ. ಪೂಜಾರಹಳ್ಳಿಯಲ್ಲಿಯೂ ಪ್ರತ್ಯೇಕ ಸಂಘವಿದ್ದರೂ ಟಿ.ಕಲ್ಲಹಳ್ಳಿಯ ಷೇರುದಾರರನ್ನು ಇಲ್ಲಿನ ಸಂಘದಲ್ಲಿಯೇ ಮುಂದುವರಿಸಿ ಚುನಾವಣೆಯಲ್ಲಿ ಅಕ್ರಮ ಎಸಗಲಾಗಿದೆ. ಹೀಗಾಗಿ, ಅಕ್ರಮವಾಗಿ ನಿರ್ದೇಶಕರಾಗಿ ಆಯ್ಕೆಯಾದವರನ್ನು ರದ್ದುಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

