ಕೂಡ್ಲಿಗಿ ; ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಅವರ ಆರೋಗ್ಯ ಮತ್ತು ಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಡಾ ಶ್ರೀನಿವಾಸ್ ಎನ್ ಟಿ ಹೇಳಿದರು.
ತಾಲೂಕಿನ ನರಸಿಂಹಗಿರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಭಾನುವಾರ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ, ಆಶಾ ಕಾರ್ಯಕರ್ತರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಮಹಿಳಾ ಅಧಿಕಾರಿಗಳು ಹಾಗೂ ರಾಜಕೀಯ ಮುಂಚೂಣಿಯ ಮಹಿಳೆಯರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಮಹಿಳೆಯರ ಶಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅವರಿಗೆ ಸನ್ಮಾನ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಆಶಾ ಕಾರ್ಯಕರ್ತರ ಕೊಡುಗೆಯನ್ನು ಶ್ಲಾಘಿಸಿದ ಅವರು ಆಶಾ ಕಾರ್ಯಕರ್ತೆಯರು ಇಂದು ಪ್ರತಿ ಮನೆಗಳ ಆಶಾ ದೀಪಗಳಂತೆ ಕೆಲಸ ಮಾಡುತ್ತಿದಾರೆ ಎಂದರು.
ಕಾರ್ಯಕ್ರಮದಲ್ಲಿ ಸಂಸದ ಈ ತುಕಾರಾಂ ಮಾತನಾಡಿ, ಸಹೋದರ ಶ್ರೀನಿವಾಸ್ ಅವರು ಕ್ಷೇತ್ರದಲ್ಲಿ ಮಾದರಿ ಕೆಲಸ ಮಾಡುತ್ತಿದ್ದಾರೆ. ಸೀಮಂತ ಸೇರಿದಂತೆ ಮಹಿಳೆಯರಿಗೆ ಸನ್ಮಾನಿಸಿ ಗೌರವ ಸಲ್ಲಿಸಿರುವುದು ಪುಣ್ಯದ ಕಾರ್ಯವಾಗಿದೆ ಎಂದ ಅವರು, ಗರ್ಭಿಣಿ ಮಹಿಳೆಯರು ಆರೋಗ್ಯದ ಕಡೆ ಜಾಗೃತಿ ವಹಿಸುವಂತೆ ತಿಳಿದರು.
ಕಾರ್ಯಕ್ರಮದಲ್ಲಿ 650 ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಜೊತೆಗೆ, 150 ಆಶಾ ಕಾರ್ಯಕರ್ತರಿಗೆ ಮತ್ತು ನೂರು ಜನಕ್ಕೂ ಅಧಿಕ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಮಹಿಳಾ ಅಧಿಕಾರಿಗಳು ಹಾಗೂ ರಾಜಕೀಯ ಮುಂಚೂಣಿಯ ಮಹಿಳೆಯರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಎನ್.ಟಿ. ತಮ್ಮಣ್ಣ, ಓಬಮ್ಮ ಬೊಮ್ಮಣ್ಣ, ತಹಶೀಲ್ದಾರ್ ವಿ ಕೆ ನೇತ್ರಾವತಿ, ಹಗರಿಬೊಮ್ಮನಹಳ್ಳಿ ತಹಶೀಲ್ದಾರ್ ಕವಿತಾ, ವಿಸಿಎಫ್ ಅನುಪಮಾ, ಪ್ರಾಚಾರ್ಯೆ ಟಿ.ಕೊತ್ಲಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಡಾ ಪುಷ್ಪ ಶ್ರೀನಿವಾಸ್, ಟಿಎಚ್ಓ ಪ್ರದೀಪ, ಬಿಸಿಎಂ ಅಧಿಕಾರಿ ಶ್ಯಾಮಪ್ಪ ಇತರರಿದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

