ಸಂಡೂರು; ನಾವು ಸೇವಿಸುವ ಆಹಾರದ ಮೇಲೆ ನಮ್ಮ ಆರೋಗ್ಯ ಅವಲಂಬಿತ. ಆಹಾರ ಪದಾರ್ಥಗಳ ಗುಣಮಟ್ಟ ಮಣ್ಣಿನ ಆರೋಗ್ಯದ ಮೇಲೆ ನಿಂತಿದೆ. ಹೀಗಾಗಿ ಮಣ್ಣು ಮೊದಲು ಸ್ವಸ್ಥ ಅಥವಾ ಸತ್ವಯುತವಾಗಿದ್ದರೆ ಮಾತ್ರ ನಮ್ಮ ಆರೋಗ್ಯವೂ ಸ್ವಸ್ಥ ಆಗಿರುತ್ತದೆ ಎಂದು ಸಾವಯವ ಕೃಷಿಕ ಬಂಡ್ರಿ ದುರುಗಪ್ಪ ಹೇಳಿದರು.
ಇವರು ಭಾನುವಾರ ತಾಲ್ಲೂಕಿನ ಬಂಡ್ರಿ ಗ್ರಾಮದ ತಮ್ಮ ಜಮೀನಿನಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ `ಹಸಿರಿನೊಂದಿಗೆ ಮಾತುಕತೆ ಬಳಗ’ ದ 17 ನೇ ಕಾರ್ಯಕ್ರಮದ ಆತಿಥ್ಯವಹಿಸಿ ಮಾತನಾಡಿದರು. ಹೆಚ್ಚಿನ ಇಳುವರಿ ಮತ್ತು ಆರ್ಥಿಕ ಲಾಭದ ದೃಷ್ಟಿಯಿಂದ ಆಧುನಿಕ ಕೃಷಿ ಅಪ್ಪಿಕೊಳ್ಳುತ್ತಿದ್ದೇವೆ. ಆದರೆ ಇದರಲ್ಲಿ ಲಾಭಕ್ಕಿಂತ ನಷ್ಟಗಳೇ ಹೆಚ್ಚು. ಪರಂಪರಾಗತ ಕೃಷಿಯನ್ನು ಅಳವಡಿಸಿಕೊಂಡರೆ ನಮಗೆ ಆರೋಗ್ಯ ಹಾಗೆ ನೆಮ್ಮದಿ ಸಿಗುತ್ತದೆ. ಕೃಷಿ ಉತ್ಪನ್ನಗಳನ್ನು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಿದರೆ ರೈತರು ಆರ್ಥಿಕವಾಗಿ ಸಧೃಢವಾಗುತ್ತಾರೆ. ಸಾವಯವದಲ್ಲಿ ಬೆಳೆದ ಆಹಾರ ಉತ್ಪನ್ನಗಳಿಗೆ ಬೇಡಿಕೆ ಇದ್ದು, ಅದನ್ನು ಬಳಸಿಕೊಳ್ಳುವ ಜಾಣತನ, ತಂತ್ರಗಳು ಗೊತ್ತಿರಬೇಕೆಂದರು. ಗಂಗಾವತಿ ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಪಿ.ಆರ್ ಬದರಿ ಪ್ರಸಾದ್ ಮಾತನಾಡಿ ವೈವಿಧ್ಯಮಯ ಬೆಳೆಗಳನ್ನು ಬೆಳೆದರೆ ನಷ್ಟಗಳ ಸಾಧ್ಯತೆ ತುಂಬಾ ಕಡಿಮೆ. ಯೋಜನಾಬದ್ಧ ಕೃಷಿಯಿಂದ ಯಶಸ್ಸು ಕಟ್ಟಿಟ್ಟ ಬುತ್ತಿ. ಇದು ರೈತರ ಶ್ರಮ, ಸಮಯ ಬೇಡುತ್ತದೆ ಎಂದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಹೆಚ್.ವಿ ಸಜ್ಜನ್ ಮಾತನಾಡಿ ರೈತರು ನಿರಂತರವಾಗಿ ಆದಾಯ ಬರುವ ಆದಷ್ಟು ಕಡಿಮೆ ವೆಚ್ಚ ಮತ್ತು ಶ್ರಮ ಬೇಡುವ ಬೆಳೆಗಳನ್ನು ಹಾಕಬೇಕು. ಇದರಿಂದ ರೈತರು ಆರ್ಥಿಕವಾಗಿ ಸಧೃಡರಾಗಬಹುದು ಎಂದರು.
ನರಸಾಪುರ ಜಿ.ಕೆ ನಾಗರಾಜ್, ಹೊಸಪೇಟೆ ಜಂಬುನಾಥ್, ತುಂಬರಗುದ್ದಿ ಕುಮಾರಸ್ವಾಮಿ, ರೇವಣ್ಣಸಿದ್ದಪ್ಪ ತಿಪ್ಪನಮರಡಿ, ಶಶಿಧರ ಗುರೂಜಿ, ನಾಗೇಶ್ವರ ಸಿ.ಎಸ್ ಪುರ ಸಾವಯವ ಕೃಷಿ ಮತ್ತು ಅದರ ಭವಿಷ್ಯದ ಕುರಿತಾಗಿ ಇರುವ ಹೊಸ ಸಾಧ್ಯತೆಗಳ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಬಂಡ್ರಿ ಓಬಳೇಶ್, ಬಸವರಾಜ್ ಕನಕಗಿರಿ, ಸ್ವರೂಪ್ ಕೊಟ್ಟೂರು, ಶಿವಣ್ಣ ಅಪ್ಪೇನಹಳ್ಳಿ, ಕರೆ ಹನುಮ, ಆಶಾ ಕೊಟ್ಟೂರು, ನಾಗಭೂಷಣ, ಸಣ್ಣಜ್ಜ, ಮಹಾಂತೇಶ್, ಆರ್. ರಾಜಾಭಕ್ಷಿ, ಹುಲಿಕೇರಿ ಶರಣಪ್ಪ, ಮಹೇಶ್ವರಪ್ಪ ಮುಂತಾದವರು ಇದ್ದರು.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ
ಅಜಯ್ ಬಿ ಟಿ ಗುದ್ದಿ 8123302594, ದಯಾನಂದ್ ಸಜ್ಜನ್ 9886972975

