ರಾಜ್ಯದಲ್ಲಿ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ (ಜಾತಿ ಸಮೀಕ್ಷೆ) ಅವಧಿಯನ್ನು ಶಿಕ್ಷಣ ಇಲಾಖೆ ವಿಸ್ತರಿಸಿದೆ. ಅಕ್ಟೋಬರ್ 7 ರಂದು ಕೊನೆಗೊಳ್ಳಬೇಕಿದ್ದ ಸಮೀಕ್ಷಾ ಕಾರ್ಯವನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ಒಂದು ವಾರದಷ್ಟು ತಡವಾಗಿ ಆರಂಭವಾಗಿದ್ದರಿಂದ, ಬೆಂಗಳೂರಿನಲ್ಲಿ ಸಮೀಕ್ಷೆಯನ್ನು ಅಕ್ಟೋಬರ್ 24 ರವರೆಗೆ ವಿಸ್ತರಿಸಲಾಗಿದೆ.
ಶಿಕ್ಷಣ ಇಲಾಖೆಯು ಇನ್ನು ಮುಂದೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಾಲಾ ತರಗತಿಗಳನ್ನು ಮುಗಿಸಿ, ಮಧ್ಯಾಹ್ನದ ನಂತರ ಸಮೀಕ್ಷೆ ನಡೆಸುವಂತೆ ಸೂಚಿಸಿದೆ.
ಸಮೀಕ್ಷೆಯ ಪ್ರಗತಿ
ರಾಜ್ಯದಲ್ಲಿ ಈವರೆಗೆ ಶೇ. 80.39 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. 1.43 ಕೋಟಿ ಮನೆಗಳ ಪೈಕಿ 1.15 ಕೋಟಿ ಮನೆಗಳ ಸಮೀಕ್ಷೆ ಮುಗಿದಿದೆ. ಇದುವರೆಗೆ 4.32 ಕೋಟಿ ಜನರು ಗಣತಿ ವ್ಯಾಪ್ತಿಗೆ ಬಂದಿದ್ದಾರೆ. ಇಂದು (ಸಮೀಕ್ಷೆ ನಡೆದ ದಿನ) 5,52,345 ಮನೆಗಳ ಸಮೀಕ್ಷೆ ಆಗಿದೆ ಬೆಂಗಳೂರಿನಲ್ಲಿ ಇಂದು 1.36 ಲಕ್ಷ ಮನೆಗಳು ಸೇರಿದಂತೆ, ಒಟ್ಟು 2.60 ಲಕ್ಷ ಮನೆಗಳ ಸಮೀಕ್ಷೆ ಪೂರ್ಣಗೊಂಡಿದೆ.
ಎದುರಾದ ಸಮಸ್ಯೆಗಳು ಮತ್ತು ವಿನಾಯಿತಿ
ಬೆಂಗಳೂರಿನ ಅಪಾರ್ಟ್‌ಮೆಂಟ್ ನಿವಾಸಿಗಳು ಸರಿಯಾದ ಮಾಹಿತಿ ನೀಡದೆ “ಆಟ ಆಡಿಸುತ್ತಿರುವುದು” ಗಣತಿದಾರರಿಗೆ ತಲೆನೋವು ತಂದಿದೆ. ಗರ್ಭಿಣಿಯರು, ಬಾಣಂತಿಯರು, ಒಂದು ವರ್ಷಕ್ಕಿಂತ ಚಿಕ್ಕ ಮಕ್ಕಳನ್ನು ಹೊಂದಿರುವವರು, ಮತ್ತು ಗಂಭೀರ ಆರೋಗ್ಯ ಸಮಸ್ಯೆ ಇರುವವರಿಗೆ ಸರ್ವೇಯಿಂದ ವಿನಾಯ್ತಿ ನೀಡಲಾಗಿದೆ. ಕೆಲ ಗಣತಿದಾರರು ಇವತ್ತೂ ಕೂಡ ತಮಗಾದ ತೊಂದರೆಗಳ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಚಿನ್ನದ ಪ್ರಶ್ನೆಗೆ ಸ್ಪಷ್ಟನೆ
ಗಣತಿ ವೇಳೆ ಚಿನ್ನದ ಬಗ್ಗೆ ಕೇಳಲಾದ ಪ್ರಶ್ನೆಗೆ ಉಪಮುಖ್ಯಮಂತ್ರಿ (DCM) ಡಿ.ಕೆ. ಶಿವಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಸಂಬಂಧ ಆಯೋಗದ ಅಧ್ಯಕ್ಷ ಮಧುಸೂದನ್ ನಾಯ್ಕ್ ಅವರು ಸ್ಪಷ್ಟನೆ ನೀಡಿದ್ದಾರೆ.
ಅವರು, “ಚಿನ್ನ ಎಷ್ಟಿದೆ ಅಂತ ಪ್ರಶ್ನೆ ಕೇಳಿಲ್ಲ. ಚಿನ್ನ ಇದೆಯೋ, ಇಲ್ವೋ ಅಂತಷ್ಟೇ ಕೇಳಿದ್ದೇವೆ. ಜೀವನಮಟ್ಟ ತಿಳಿದುಕೊಳ್ಳಲು ಇದು ಅಗತ್ಯ. ಇದರಲ್ಲಿ ತಪ್ಪೇನಿದೆ ಎಂದು ನನಗೆ ಅರ್ಥ ಆಗ್ತಿಲ್ಲ,” ಎಂದು ತಿಳಿಸಿದ್ದಾರೆ.